ರೈತ ಚಳವಳಿ -
ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸಮಕಾಲೀನ ವ್ಯವಸ್ಥೆಯ ಪ್ರತಿಭಟನೆಯೊಡನೆ ಹುಟ್ಟಿಕೊಂಡ ಒಂದು ಸಂಘಟನೆ. ಭಾರತದಲ್ಲಿ ಇಲ್ಲಿಯವರೆಗೆ ಸುಮಾರು ನೂರು ರೈತ ಚಳವಳಿಗಳು ನಡೆದಿವೆ ಎಂದು ಅಂದಾಜುಮಾಡಲಾಗಿದೆ. ಮೊಗಲರ ಕಾಲದಿಂದ ಈವರೆಗೆ ಭಾರತದಲ್ಲಿ 77 ರೈತ ಹೋರಾಟಗಳ ದಾಖಲೆಯನ್ನು ಕ್ಯಾಥಲೀನ್ ಗಾಫೆ ಎಂಬಾಕೆ ಕೊಟ್ಟಿದ್ದಾಳೆ. ಇಂಥ ಚಳವಳಿಗಳನ್ನು ಆಕೆ ಐದು ವಿಧವಾಗಿ ವಿಂಗಡಿಸಿದ್ದಾಳೆ. ಈ ಪಟ್ಟಿಗೆ ಡಿ.ಎನ್. ಧನಗರೆ ಎಂಬಾತ ಮತ್ತೊಂದು ಪ್ರಕಾರವನ್ನು ಸೇರಿಸಿದ್ದಾನೆ. ರೈತ ಚಳವಳಿಯ ಆರು ವಿಧಗಳು ಹೀಗಿವೆ:

 1. ಪುನಸ್ಥಾಪನ ದಂಗೆಗಳು
 2. ಧಾರ್ಮಿಕ ಚಳವಳಿಗಳು
 3. ಸಮಾಜನಿಷ್ಠ ದರೋಡೆಗಳು
 4. ಭಯೋತ್ಪಾದಕ ಪ್ರತೀಕಾರಗಳು 
 5. ಜನತಾ ಚಳವಳಿಗಳು  ಮತ್ತು
 6. ಸುಧಾರಣಾವಾದಿ ಚಳವಳಿಗಳು.

ಸ್ವಾತಂತ್ರ್ಯಪೂರ್ವ ರೈತ ಚಳವಳಿಗಳು ಹೆಚ್ಚಾಗಿ ಪರಕೀಯರ ವಿರುದ್ಧ ನಡೆದವು. ಭೂಸಂಬಂಧವುಳ್ಳ ಎಲ್ಲ ವರ್ಗದ ರೈತರೂ ಇಂಥ ಚಳವಳಿಗ ಳಲ್ಲಿ ಭಾಗವಹಿಸಿದ್ದಾರೆ. ಮೊದಲ ಎರಡು ಹಂತದ ಚಳವಳಿಗಳಲ್ಲಿ ಪರಕೀಯರಿಂದಾಗಿ ಭೂಮಿ ಕಳೆದುಕೊಂಡ ಪಾಳೆಯಗಾರರು, ಹಳೆಯ ಪ್ರಭುಗಳು, ಆಡಳಿತಗಾರರು, ದಿವಾಳಿ ಎದ್ದ ರೈತರು, ಕೈ ಕಸಬುಗಳನ್ನು ಕಳೆದುಕೊಂಡವರು, ಕೂಲಿ ಕಾರ್ಮಿಕರು, ಧರ್ಮಗುರುಗಳು ಹಾಗೂ ಆದಿವಾಸಿ ಮುಖಂಡರು ಭಾಗವಹಿಸಿದ್ದಾರೆ.

ಶ್ರೀಮಂತರು ಹಾಗೂ ಭೂಮಾಲೀಕರ ಕಿರುಕುಳದಿಂದ ಬದುಕುಗೆಟ್ಟ ಶಕ್ತಿಶಾಲಿಗಳು ಅವರ ವಿರುದ್ಧ ನಿಂತು, ಅವರ ಆಸ್ತಿ-ಪಾಸ್ತಿಯನ್ನು ದರೋಡೆ ಮಾಡಿದರು. ದರೋಡೆ ಮಾಡಿದ ಆಸ್ತಿಯಲ್ಲಿ ಬಹುಪಾಲನ್ನು ನೊಂದವರಿಗೆ, ಬಡವರಿಗೆ ಹಂಚಿದರು. ಈ ಕಾರಣವಾಗಿ ಇವರ ದರೋಡೆಗಳು ಸಮಾಜನಿಷ್ಠವಾಗಿದ್ದವು ಎನ್ನಬಹುದು. 17 ಹಾಗೂ 18ನೆಯ ಶತಮಾನಗಳಲ್ಲಿ ಮಧ್ಯಭಾರತದ ಠಕ್ಕರು, ಮದರಾಸು ಪ್ರಾಂತದ ಕಳ್ಳರ್, ಕೇರಳದ ಸನ್ಯಾಸಿ-ಫಕೀರರು ಈ ಕ್ರಿಯೆಯಲ್ಲಿ ತೊಡಗಿದ್ದರು.

ಭಯೋತ್ಪಾದಕ ಪ್ರತೀಕಾರದ ಹಲವು ಹೋರಾಟಗಳು ನಡೆದಿವೆ. ಶ್ರೀಮಂತರು, ಭೂ ಮಾಲೀಕರು, ಸರ್ಕಾರಿ ಅಧಿಕಾರಿಗಳಿಂದ ಒಕ್ಕಲೆಬ್ಬಿಸುವಿಕೆ, ಅಧಿಕ ಕಂದಾಯ, ಬಿಟ್ಟಿ ಕೆಲಸಗಳಂಥ ಹಿಂಸಾತ್ಮಕ ಒತ್ತಡಗಳಿಂದ ಈ ಹೋರಾಟಗಳು ಹುಟ್ಟಿಕೊಂಡಿವೆ. ತೀವ್ರಗಾಮಿ ಎಡಪಂಥೀಯ ಹೋರಾಟಗಳು ಈ ಗುಂಪಿನಲ್ಲಿ ಬರುತ್ತವೆ. ಸ್ವಾತಂತ್ರ್ಯ ಹೋರಾಟ ಸಂದರ್ಭದ ರೈತ ಚಳವಳಿಗಳು ಜನತಾ ಆಂದೋಲನದೊಳಗೆ ಸೇರಿಕೊಂಡು ಬಂದವು. ಸ್ವಾತಂತ್ರ್ಯಪೂರ್ವ ಹಾಗೂ ಅನಂತರದಲ್ಲಿ ಸುಧಾರಣಾ ನೆಲೆಯ ಚಳವಳಿಗಳು ನಡೆದಿವೆ.

ಬಹುಶಃ ಮೊಗಲ್ ಸಾಮ್ರಾಜ್ಯದ ಬೆಳೆವಣಿಗೆಯ ಆರಂಭ ಭಾರತದ ರೈತ ಹೋರಾಟಗಳಿಗೆ ನೆಲೆ ಕಲ್ಪಿಸಿಕೊಟ್ಟಂತೆ ಕಾಣುತ್ತದೆ. ಹೊಸ ರೀತಿಯ ಭೂ ವಿಂಗಡನೆ, ಹಂಚಿಕೆ ಹಾಗೂ ಕಂದಾಯ ನಿಗದಿ ಕ್ರಮ ಭಾರತದ ಭೂಒಡೆತನದ ನೆಲೆಯನ್ನು ಅಲ್ಲಾಡಿಸಿತು. ಆದರ ಪರಿಣಾಮವಾಗಿ ಬೇರೆ ಬೇರೆ ರೀತಿಯಲ್ಲಿ ರೈತರು ಸಂಘಟಿತರಾದರು. ಕೆಲಮಟ್ಟಿಗೆ ಆಡಳಿತ ವ್ಯವಸ್ಥೆಯನ್ನೂ ಪ್ರಶ್ನಿಸಿದರು. ಕೈಗಾರಿಕಾ ಕ್ರಾಂತಿಗೆ ಮೊದಲು ಭೂಒಡೆತನದಲ್ಲಿ ಆದ ಬದಲಾವಣೆಗಳು ರಾಜ್ಯಗಳ ನಾಶ ಹಾಗೂ ಉದಯದ ಕಥೆಗಳಾಗಿವೆ. ಇವು ರೈತರ ಭೂಮಿಯನ್ನು ಕುರಿತ ನಿಜ ಕಥೆಗಳು. ಮೊಗಲರೂ ಈ ದೇಶದ ಪ್ರಜೆಗಳೇ ಆಗಿ ಕರಗಿ ಹೋದುದರಿಂದ ಆ ಕಾಲದ ರೈತ ಪ್ರತಿಭಟನೆಗಳು ಹೆಚ್ಚು ಸಾಮೂಹಿಕ ಸ್ವರೂಪ ಪಡೆದುಕೊಂಡಂತೆ ಕಾಣುವುದಿಲ್ಲ.

ಬ್ರಿಟಿಷರು ಹೊರಗಿನಿಂದ ಭಾರತಕ್ಕೆ ಬಂದರಾದರೂ ಇಲ್ಲಿಯವರಾ ಗಲಿಲ್ಲ. ಅವರು ಇಲ್ಲಿಂದ ಸಂಪತ್ತನ್ನು ಒಯ್ಯುವ ವ್ಯಾಪಾರಿ ರಾಜಪ್ರಭುಗ ಳಾಗಿದ್ದರು. ವ್ಯವಸಾಯ ಜೀವನಕ್ಕೆ ಸ್ಪರ್ಧಿಯಾಗಿ ಕೈಗಾರಿಕಾ ಸಂಸ್ಕøತಿಯನ್ನು ಬೆಳೆಸತೊಗಿದರು. ಭಾರತದ ವ್ಯವಸಾಯಿಕ ಉತ್ಪನ್ನಗಳು ಇಂಗ್ಲೆಂಡಿನ ಕೈಗಾರಿಕೀಕರಣವನ್ನು ಅಭಿವೃದ್ಧಿಗೊಳಿಸುವ ಸಾಧನವಾದವು. ಸರ್ಕಾರದ ಬೊಕ್ಕಸ ತುಂಬಲು ಹಾಗೂ ತಮ್ಮ ಯುದ್ಧ ವೆಚ್ಚವನ್ನು ಭರಿಸಲು ಇವರು ಭಾರತದ ವ್ಯವಸಾಯಗರ ಮೇಲೆ ಹೆಚ್ಚು ಕಂದಾಯ ವಿಧಿಸಿದರು. ನೇರ ಕಂದಾಯ ವಸೂಲಿಯಾಗಲು ಕೃಷಿಕರ ಮಧ್ಯೆ ಅನೇಕ ಬಗೆಯ ಮಧ್ಯವರ್ತಿಗಳನ್ನು ತಂದರು. ಹೊಸ ಭೂಮಾಲೀಕರು, ಜಹಗೀರುದಾರರು, ಇನಾಂದಾರರು, ವ್ಯಾಪಾರಿಗಳು, ಅಧಿಕಾರಿಗಳು ಸ್ಥಾಪಿತರಾದರು. ಅನೇಕ ರೈತರು ಭೂಮಿ ಕಳೆದುಕೊಂಡು ಕೂಲಿಗಳಾದರು. ಸ್ವಯಂ ಬೇಸಾಯ ಸಂಸ್ಕøತಿಯ ಆದಿವಾಸಿಗಳ ಮೇಲೆ ಇದು ತೀವ್ರ ಪರಿಣಾಮ ಬೀರಿತು. ಅವರು ಹೊಸ ಜಮೀನುದಾರರ ಕೈಕೆಳಗೆ ಬರುವಂತಾಯಿತು. ಸ್ಥಳೀಯ ಗುಡಿಕೈಗಾರಿಕೆಗಳು ನಾಶವಾದುವು. ಯಾರ್ಕ್‍ಷೈರ್‍ನಿಂದ ಬಟ್ಟೆಬರೆಗಳನ್ನು ಕೊಳ್ಳುವ ಸ್ಥಿತಿ ಉಂಟಾಯಿತು. ವಾಣಿಜ್ಯ ಬೆಳೆಗಳನ್ನು ಬೆಳೆಯಲು ಒತ್ತಾಯ, ಹಿಂಸೆ ಕೊಡಲಾಯಿತು. ಆಹಾರ ಬೆಳೆಗಳು ಗಣನೀಯವಾಗಿ ಕಡಿಮೆಯಾದವು.  ಸಾಮಾನ್ಯರ ಜೀವನ ನಿರ್ವಹಣೆ ಕಷ್ಟವಾಯಿತು. ತೆರಿಗೆ ಕೊಟ್ಟು ಉಳಿದುದರಲ್ಲಿ ಜೀವನ ಸಾಗಿಸುವುದು ದುಸ್ತರವಾಯಿತು. ಈ ಕಾರಣದ ಮೇಲೆ ಆದಿವಾಸಿ ಕೃಷಿಕರು, ಬೇರೆ ಬೇರೆ ನೆಲೆಯಲ್ಲಿ ಕೃಷಿ ಮಾಡುತ್ತಿದ್ದ ರೈತರು ಸ್ಥಳೀಯ ನೆಲೆಯಲ್ಲಿ ಸಂಘಟನೆಗೊಂಡು ಪ್ರತ್ಯಕ್ಷವಾಗಿ ಸ್ಥಳೀಯ ಭೂಮಾಲೀಕರನ್ನು, ಪರೋಕ್ಷವಾಗಿ ಬ್ರಿಟಿಷರನ್ನು ವಿರೋಧಿಸುವುದು ಅನಿವಾರ್ಯವಾಯಿತು.

ಸ್ವಾತಂತ್ರ್ಯಪೂರ್ವದ ರೈತ ಹೋರಾಟಗಳು ಪ್ರಾದೇಶಿಕವಾದುವು; ಅವುಗಳ ಉದ್ದೇಶಕೂಡ ಸೀಮಿತವಾಗಿರುತ್ತಿತ್ತು. ಸದ್ಯದ ನೋವಿಗೆ ಪರಿಹಾರ ಕಂಡುಕೊಳ್ಳುವುದು ಮುಖ್ಯ ಅಪೇಕ್ಷೆಯಾಗಿತ್ತು. ಶತ್ರುಗಳನ್ನೂ ಸಮಸ್ಯೆಗಳನ್ನೂ ಸ್ಪಷ್ಟವಾಗಿ ಗುರುತಿಸಿ ಹೋರಾಡುವ ಭೂಮಿಕೆ ಇನ್ನೂ ಸಿದ್ಧವಾಗಿರಲಿಲ್ಲ. ಬಹಳ ಮುಖ್ಯವಾಗಿ ಈ ಹೋರಾಟಗಳು ತಮ್ಮ ಪೂರ್ವಾಶ್ರಮ ಜೀವತತ್ತ್ವ ಹಾಗೂ ವರ್ಗಗಳಿಂದ ಹೊರಗೆ ಬರಲು ಇಚ್ಛಿಸಲಿಲ್ಲ. ಆದುದರಿಂದಲೆ ಈ ರೈತ ಹೋರಾಟಗಳ ಜೊತೆಗೆ ಮತ, ಧರ್ಮ ಮುಂತಾದ ನಿರ್ಬಂಧಗಳು ಹೇರಿಕೊಂಡಿದ್ದವು. ಈ ಸನ್ನಿವೇಶದಲ್ಲಿ ಕಂಡು ಬಂದ ಮುಖ್ಯ ನೆಲೆಯ ಹೋರಾಟಗಳಿವು:

 1772-80 ಸಂನ್ಯಾಸಿ - ಫಕೀರರ ದಂಗೆಗಳು
 1855ರ ಸಂತಾಲ ದಂಗೆ
 1860ರ ನೀಲಿ ಬೆಳೆಗಾರರ ಚಳವಳಿ
 1875ರ ದಕ್ಷಿಣದ ದಂಗೆಗಳು
 1836-1931ರ ಮಾಪಿಳ್ಳೆ ದಂಗೆಗಳು
 1928ರ ಬಾರ್ಡೋಲಿಯ ರೈತ ಸತ್ಯಾಗ್ರಹ
 1945-46ರ ವಾರಲಿ ಆದಿವಾಸಿಗಳ ಹೋರಾಟ ಹಾಗೂ
 1946-47ರ ತೇಭಾಗ ಚಳವಳಿ

ರೈತರು ತಮ್ಮ ಹಿಂಸೆಗೆ ಸಂನ್ಯಾಸಿ, ಫಕೀರರ ವೇಷದಲ್ಲಿ ಸಂಘಟನೆ ಗೊಂಡು ಪ್ರತಿಕ್ರಿಯಿಸಿದ ರೀತಿಯೇ ಸಂನ್ಯಾಸಿ-ಫಕೀರರ ದಂಗೆ. ಇವು ರೈತಾಪಿ ಜನರ ಪ್ರಥಮ ಪ್ರತಿಭಟನೆಗಳು, ಬ್ರಿಟಿಷರ ವಿರುದ್ಧದ ಮೊದಲ ಯುದ್ಧಗಳು. ಬ್ರಿಟಿಷರ ಆಡಳಿತ ಹಾಗೂ ಕಂದಾಯ ನೀತಿಯನ್ನು ಪ್ರತಿಭಟಿಸಿದಾಗ ಬ್ರಿಟಿಷ್ ಸೈನ್ಯ ಹಳ್ಳಿ ಹಳ್ಳಿಗಳನ್ನೇ ನಾಶಮಾಡುತ್ತಿತ್ತು. ಈ ಘಟನೆಗಳಿಂದ ನೆಲೆ ಕಳೆದುಕೊಂಡವರು ಸಂಘಟಿತರಾಗಿ ಬ್ರಿಟಿಷರ ಪರವಾಗಿದ್ದ ಭೂಮಾಲೀಕರನ್ನೂ ಆಡಳಿತಗಾರರನ್ನೂ ಅವರ ಸೇವಕರನ್ನೂ  ಹಿಡಿದು ಬಡಿಯುತ್ತಿದ್ದರು. ಬ್ರಿಟಿಷ್ ಸರ್ಕಾರಕ್ಕೆ ಸೇರಬೇಕಾದ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದರು. ಬಿಹಾರ, ಬಂಗಾಲ ಹಾಗೂ ಪೂರ್ವ-ಈಶಾನ್ಯ ಭಾರತದ ಹಲವು ಪ್ರದೇಶಗಳಿಗೆ ಈ ದಂಗೆಗಳು ಹರಡಿದ್ದವು.

ಸಂತಾಲರ ದಂಗೆ ಭಾರತದ ಆರ್ಥಿಕ ಹಾಗೂ ಸಾಂಸ್ಕøತಿಕ ಇತಿಹಾಸದ ಮೇಲೆ ಬ್ರಿಟಿಷರು ಹಾಕಿದ ಒಂದು ದೊಡ್ಡ ಬರೆ. ಸಂತಾಲರು ನಿಜವಾದ ಬೇಸಾಯಗಾರರು. ಇವರದು ಬೇಸಾಯವನ್ನು ಆಧರಿಸಿದ ರಾಜ್ಯ ಪದ್ಧತಿ ಹಾಗೂ ಸಾಂಸ್ಕøತಿಕ ಜೀವನ. ಬ್ರಿಟಿಷರ ಹೊಸ ಭೂ ಹಂಚಿಕೆ ಹಾಗೂ ಬಡತನದ ಕಾರಣವಾಗಿ ಇವರು ಹೊಸ ಭೂಮಾಲೀಕರಿಗೆ ತಮ್ಮ ಜಮೀನಿನ ಒಡೆತನ ಬಿಟ್ಟುಕೊಟ್ಟು ಅವರಲ್ಲಿ ಕನಿಷ್ಠ ಕೂಲಿಗಾಗಿ ದುಡಿಯುವ ಕೂಲಿಕಾರರಾಗಬೇಕಾಯಿತು. ನೆಲಬಿಡಿ ಇಲ್ಲವೆ ಗೇಣಿಕೊಡಿ ಎಂದು ಹೊಸ ಮಾಲೀಕರು ಇವರಿಗೆ ತಾಕೀತು ಮಾಡಿದರು. ಜಮೀನುದಾರರ, ಪೊಲೀಸರ, ಅಧಿಕಾರಿಗಳ ಮತ್ತು ಸಾಲಗಾರರ ಹಿಂಸೆ, ಹೆಂಡತಿ ಮಕ್ಕಳ ಮೇಲಿನ ದೌರ್ಜನ್ಯ, ತೂಕ ಮತ್ತು ಮಾರಾಟದಲ್ಲಿ ಮೋಸ - ಈ ಕಾರಣಗಳಿಂದಾಗಿ ಮುಗ್ಧರಾದ ಈ ಬುಡಕಟ್ಟು ಜನ ತತ್ತರಿಸಿ ಹೋದರು. ಬದುಕುವ ಕೊನೆಯ ಆಸೆಯಾಗಿ ಹೋರಾಟಕ್ಕೆ ನಿಂತರು. ಸಾವಿರ ಸಾವಿರ ಸಂಖ್ಯೆಯಲ್ಲಿ ಸಂಘಟಿತರಾಗಿ ಹಿಂಸೆಯ ಮಾರ್ಗ ಹಿಡಿದು ತಮ್ಮ ಅಸ್ತಿತ್ವ ಸ್ಥಾಪಿಸಿಕೊಳ್ಳಲು ಹೊರಟರು. ಬ್ರಿಟಿಷ್ ಸೈನ್ಯ ಸಂತಾಲ ಸಮುದಾಯ ವನ್ನು ಸದೆ ಬಡಿಯಿತು. ಸಂತಾಲರು ತಮ್ಮ ಬಿಲ್ಲು ಬಾಣ ಮತ್ತು ದೈಹಿಕ ಶಕ್ತಿಗಳಿಂದಲೇ ನೈತಿಕ ಹೋರಾಟವನ್ನು ಮುಂದುವರಿಸಿದರು. ಈ ದಂಗೆಯಲ್ಲಿ ಸುಮಾರು 25 ಸಾವಿರ ಸಂತಾಲರು ಸತ್ತರೆಂದು ವರದಿ.

	ಬಂಗಾಲ, ಬಿಹಾರ ಪ್ರದೇಶದ ನೀಲಿ ಬೆಳೆಗಾರರೆಂದರೆ ಆ ಕಾಲದ ಬ್ರಿಟಿಷ್ ಹಾಗೂ ಬ್ರಿಟಿಷ್ ಪರ ಭೂಮಾಲೀಕರು, ಗುಲಾಮರು ಎಂದೇ ಹೇಳಬೇಕು. ತಮ್ಮ ಹೊಟ್ಟೆಗೆ ಅನ್ನ ಬೆಳೆದುಕೊಳ್ಳುವುದಕ್ಕೆ ಅವಕಾಶವಿಲ್ಲದೆ ಆಳುವ ಪ್ರಭುಗಳ ಬಟ್ಟೆಗೆ ಬೇಕಾದ ನೀಲಿ ಬಣ್ಣಕೊಡುವ ಬೆಳೆ ಬೆಳೆದು ಕೊಡುವ ಕೈದಿಗಳಂತೆ ಇವರು ದುಡಿದರು. ಇವರ ಮೇಲಿನ ಹಿಂಸೆ ಹೇಳಲಸದಳ. ಬದುಕು ತೀರ ಕಷ್ಟ. ನೀಲಿ ಬೆಳೆಗಾರರಾದ ಹಿಂದು ಮುಸ್ಲಿಮ್ ನೌಕರರು ತಮ್ಮ ಶೋಷಣೆಯನ್ನು ಪ್ರತಿಭಟಿಸಿದರು. ಶೋಷಕರಿಗೆ ಮುತ್ತಿಗೆ ಹಾಕಿದರು. ಸರ್ಕಾರದ ಮಧ್ಯ ಪ್ರವೇಶದಿಂದ ಸ್ವಲ್ಪ ಪರಿಹಾರವನ್ನೂ ಪಡೆದರು.

ದಖನ್ ದಂಗೆಯ ಮೂಲಸ್ಥಾನ ಮುಂಬಯಿ ಪ್ರಾಂತದ ಪುಣೆ ಮತ್ತು ಅಹಮದ್‍ನಗರ ಪ್ರದೇಶಗಳು. ಇವು ರೈತವಾರಿ ಜಿಲ್ಲೆಗಳಾಗಿದ್ದವು. ಮುಂಬಯಿ ಸರ್ಕಾರ ಕಂದಾಯ ಹೆಚ್ಚಿಸುತ್ತಹೋಯಿತು. ಸ್ಥಳೀಯ ಸಾಹುಕಾರರ ಬಡ್ಡಿ ವ್ಯವಹಾರ ಜನರ ಮೈಮೇಲೆ ಅಮರಿಕೊಂಡಿತು. ಇದರಿಂದಾಗಿ ಚಿಕ್ಕ ಪುಟ್ಟ ರೈತರೆಲ್ಲ ಜಮೀನು ಕಳೆದುಕೊಳ್ಳುತ್ತ ಹೋದರು. ಸಿಟ್ಟುಗೊಂಡ ಅವರು ಸಂಘಟಿತರಾಗಿ ಬಡ್ಡಿ ವ್ಯಾಪಾರಿಗಳಿಗೆ ಮುತ್ತಿಗೆ ಹಾಕಿದರು. ಸಾಲ ಪತ್ರಗಳನ್ನು ಕಿತ್ತು ಸುಟ್ಟುಹಾಕಿದರು. ದಂಗೆ ಅಡಗಿಸಲು ಸೈನ್ಯ ಬಂತು. ಸೆರೆಸಿಕ್ಕವರಿಗೆ ಹಿಂಸೆಯ ಜೊತೆಗೆ ಪುಂಡುಗಂದಾಯ ಹಾಕಲಾಯಿತು.
	
ಮಾಪಿಳ್ಳೆಗಳ ದಂಗೆ ಆರ್ಥಿಕ ಸ್ವರೂಪದಲ್ಲಿ ಕಾಣಿಸಿಕೊಂಡರೂ ಅದರ ಅಂತರಂಗ ಅವರ ಧಾರ್ಮಿಕ ಅಸ್ತಿತ್ವದಲ್ಲಿದೆ. ಅರಬ್ ದೇಶಗಳಿಂದ ಬಂದ ವ್ಯಾಪಾರಿಗಳು ಹಾಗೂ ಕೇರಳದ ಸ್ಥಳೀಯ ಹೆಣ್ಣುಗಳ ವೈವಾಹಿಕ ಸಂಬಂಧದಿಂದ ಹುಟ್ಟಿದವರು ಮಾಪಿಳ್ಳೆಗಳು. ಇವರು ಕೇರಳದ ಆ ಕಾಲದ ಭೂಒಡೆಯರಾದ ನಂಬೂದರಿಗಳು ಹಾಗೂ ಅವರ ಸಹವಾಸಿಗಳಾದ ನಾಯರ್‍ಗಳಲ್ಲಿ ಕೃಷಿಕೂಲಿಗಾಗಿ ಕೆಲಸ ಮಾಡುತ್ತಿದ್ದರು. ಇವರು ಹೆಚ್ಚಿನ ಗೇಣಿ ಕೊಡಬೇಕಿತ್ತು, ಕೊಡದಿದ್ದರೆ ಒಕ್ಕಲೆಬ್ಬಿಸುತ್ತಿದ್ದರು. ಸಾಮಾಜಿಕವಾಗಿ ಹೀನವಾಗಿ ನೋಡಿಕೊಳ್ಳುತ್ತಿದ್ದರು. ಬಹಳಕಾಲದ ಈ ಹಿಂಸೆಯಿಂದಾಗಿ ಅವರು ಸಿಡಿದೆದ್ದರು. 1863ರಿಂದ 1921ರ ವರೆಗೆ ಸುಮಾರು ಐವತ್ತು ದಂಗೆಗಳಾದವು. ಅನೇಕ ಹಿಂಸಾಕೃತ್ಯಗಳು ನಡೆದವು. ಸಾವಿರಾರು ಮಾಪಿಳ್ಳೆಗಳು ಸತ್ತರು. ಈ ಎಲ್ಲದಕ್ಕೆ ಅವರ ಧಾರ್ಮಿಕ ಗುರುಗಳ ಬೆಂಬಲವೂ ಇತ್ತು. ಒಂದು ಕಡೆ ತಮ್ಮ ಭೂ ಮಾಲೀಕರ ವಿರುದ್ಧ ಹೋರಾಡಿದರು. ಮತ್ತೊಂದು ಕಡೆ ಹಿಂದೂ ಧರ್ಮದವರಿಂದ ಬಹಿಷ್ಕøತರಾಗಿ ದೂರವಿರಿಸಲ್ಪಟ್ಟ ಜನರೊಂದಿಗೆ ಸ್ನೇಹ-ವೈವಾಹಿಕ ಸಂಬಂಧ ಬೆಳೆಸಿಕೊಂಡು ತಮ್ಮ ಜನಸಂಖ್ಯೆಯನ್ನು ವೃದ್ಧಿಸಿಕೊಂಡರು. ಕೊನೆಗೆ ಒಂದು ರಾಜಕೀಯ ಬಲವಾಗಿ ರೂಪುಗೊಂಡರು.
	
ಗಾಂಧೀಯವರ ಸತ್ಯಾಗ್ರಹ ಪರಿಕಲ್ಪನೆ ರೂಪುಗೊಳ್ಳುವವರೆಗಿನ ರೈತ ಹೋರಾಟಗಳು ದೈಹಿಕ ಹಿಂಸೆಗಳಾಗಿದ್ದವು. ಸತ್ಯಾಗ್ರಹ ರೈತ ಹೋರಾಟದ ಅಸ್ತ್ರವಾದ ಮೇಲೆ ಅವು ಮಾನಸಿಕ ಹಿಂಸೆ - ಪ್ರತಿ ಹಿಂಸೆಯ ಸ್ವರೂಪ ಪಡೆದವು. ಕೆಲಮಟ್ಟಿಗೆ ರೈತರ ಸಮಸ್ಯೆಗಳ ಪರವಾಗಿ ಹೋರಾಡಲು ಕಾಂಗ್ರೆಸ್ ನಿರ್ಧರಿಸಿತು. 1928ರ ಬಾರ್ಡೋಲಿಯ ರೈತ ಸತ್ಯಾಗ್ರಹ ಇದಕ್ಕೊಂದು ಉದಾಹರಣೆ. ಈ ಹೋರಾಟ ಎರಡು ಹಂತದಲ್ಲಿ ನಡೆಯಿತು. ಇದರ ನೇತೃತ್ವವನ್ನು ಗಾಂಧೀಯವರ ಸಮ್ಮತಿಯಂತೆ ಸರ್ದಾರ್ ವಲ್ಲಭಭಾಯಿ ಪಟೇಲ್ ವಹಿಸಿದ್ದರು. ಅವರನ್ನು ಬಾರ್ಡೋಲಿಯ ವೀರ ಎಂದೂ ಕರೆಯಲಾಯಿತು.

ಸೂರತ್ ಪ್ರಾಂತದ ಭೂಮಾಲೀಕರು ಮತ್ತು ಅವರ ಗೇಣಿದಾರರ ಮಧ್ಯೆ ವೈಮನಸ್ಯ ಉಂಟಾಯಿತು. ದೂಬ್ಲಾ, ನಾಯಿಕ, ಚೋಧ್ರಾ, ದೂಧಿಯಾ, ಗಾಮಿಟ ಮುಂತಾದ ಕೂಲಿಕಾರ ಜನ ಪಟಿದಾರ ಭೂಮಾಲೀಕ-ವ್ಯಾಪಾರಿಗಳ ವಿರುದ್ಧ ತಿರುಗಿ ಬಿದ್ದರು. ಪಟಿದಾರರಿಂದ ಪಡೆದ ಸಾಲಕ್ಕೆ ತಮ್ಮ ಚಿಕ್ಕಪುಟ್ಟ ಭೂಮಿಯನ್ನೂ ಕಳೆದುಕೊಂಡರು. ಜೊತೆಗೆ ಮುಂಬಯಿ ಸರ್ಕಾರ ಸೇ. 22ರಷ್ಟು ಕಂದಾಯ ಏರಿಸಿತು. ಇದರ ಹೊರೆ ಗೇಣಿದಾರ ಕೂಲಿಕಾರ್ಮಿಕರ ಮೇಲೆ ಬಿತ್ತು. ಸಾಯುವವನ ಮೇಲೆ ಕಲ್ಲು ಎತ್ತಿಹಾಕಿದಂತಾಯ್ತು. ಇದನ್ನು ಎಲ್ಲ ರೈತರೂ ವಿರೋಧಿಸಿ ಒಂದಾದರು. ಚಳವಳಿ ಸರ್ಕಾರದ ವಿರುದ್ಧವಾಯಿತು. ಸರ್ಕಾರ ಇವರನ್ನು ಹತ್ತಿಕ್ಕಲು ಅನಾಗರಿಕ ಕ್ರಮಗಳನ್ನು ಅನುಸರಿಸಿತು. ವಲ್ಲಭಭಾಯಿ ಪಟೇಲ್ ಹಾಗೂ ಇತರ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಸತ್ಯಾಗ್ರಹ ನಡೆಯಿತು. ಸೇ. 22  ಕಂದಾಯ 61/4ಕ್ಕೆ ಇಳಿಸುವ ಮೂಲಕ ಸತ್ಯಾಗ್ರಹ ಯಶಕಂಡಿತು.

ವಾರಲಿ ಆದಿವಾಸಿಗಳ ಹೋರಾಟ ಸಂತಾಲ ದಂಗೆಯ ರೀತಿಯದಾದರೂ ಕಮ್ಯೂನಿಸ್ಟ್ ಪಕ್ಷದ ಬೆಂಬಲದೊಂದಿಗೆ ವ್ಯವಸ್ಥಿತವಾಗಿ ನಡೆಯಿತು. ಒಂದು ಕಾಲಕ್ಕೆ ಭೂಮಿ ಹೊಂದಿ ಉತ್ತಮ ಸ್ಥಿತಿಯಲ್ಲಿದ್ದ ಇವರನ್ನು ಮುಂಬಯಿಯ ವಿವಿಧ ವರ್ಗದ ಜನ ಶೋಷಣೆ ಮಾಡುತ್ತಿದ್ದರು. ಕೊನೆಗೆ ಅತ್ಯಂತ ದೀನಸ್ಥಿತಿಯ ಕೂಲಿಕಾರ್ಮಿಕರನ್ನಾಗಿ ಮಾಡಿದರು. ಸರ್ಕಾರ, ಸಾಹುಕಾರ, ಅಧಿಕಾರಿ, ದಲ್ಲಾಳಿಗಳು ಸೇರಿಕೊಂಡು ಇವರ ಬದುಕನ್ನು ನರಕ ಸಮಾನ ಮಾಡಿದರು. ಕಮ್ಯೂನಿಸ್ಟ್ ಪಕ್ಷದ ತಾತ್ತ್ವಿಕತೆಯ ಅಡಿಯಲ್ಲಿ ಒಂದಾಗಿ ತಮ್ಮ ದಾಸ್ಯದ ವಿರುದ್ಧ ಇವರು ತೀವ್ರ ಹೋರಾಟ ನಡೆಸಿದರು. ಭಾರತ ಕಿಸಾನ್ ಸಭಾ ನಾಯಕತ್ವದ ಈ ಹೋರಾಟ ಕೆಲಮಟ್ಟಿಗಾದರೂ ಸಫಲತೆ ಪಡೆಯಿತು.

ಬಂಗಾಲದಲ್ಲಿ ನಡೆದ ತೇಭಾಗ ರೈತ ಚಳವಳಿ ಮೂರನೆಯ ಎರಡು ಪಾಲು ಫಸಲು ತಮಗೆ ಇರಬೇಕು ಎಂದು ಗೇಣಿದಾರರು ನಡೆಸಿದ ಹೋರಾಟ ಅಖಿಲ ಭಾರತ ಕಿಸಾನ್‍ಸಭಾ ಹಾಗೂ ಬಂಗಾಲ ಕಿಸಾನ್‍ಸಭಾ ನಾಯಕತ್ವದಲ್ಲಿ ಈ ಹೋರಾಟ ತನ್ನ ಬೇಡಿಕೆಯನ್ನು ಈಡೇರಿಸಿಕೊಂಡಿತು.

ಐದು ವರ್ಷಗಳ ಕಾಲ ನಡೆದ ತೆಲಂಗಾಣ ರೈತ ಹೋರಾಟ ವಿಶಿಷ್ಟ ಬಗೆಯದು. ಮೂಲತಃ ಸಾಹಿತ್ಯ ಮತ್ತು ಸಂಸ್ಕøತಿಯ ಪುನರುತ್ಥಾನ ಇದರ ಗುರಿ. ಉರ್ದು ಭಾಷೆಗಿದ್ದ ರಾಜ ಮನ್ನಣೆಯಿಂದಾಗಿ ತೆಲುಗು ಸಾಹಿತ್ಯ ಸಂಸ್ಕøತಿಗಳು ಕಳಾಹೀನವಾಗಿದ್ದವು. ಇದನ್ನು ಮನಗಂಡ ಮಧ್ಯಮ ವರ್ಗದ ಸಾಹಿತಿ-ಚಿಂತಕರು 1921ರಲ್ಲಿ ಆಂಧ್ರ ಜನಸಂಘಮ್ ಎಂಬ ಸಂಸ್ಥೆಯನ್ನು ಕಟ್ಟಿಕೊಂಡರು. 1928ರ ಹೊತ್ತಿಗೆ ಇದು ಆಂಧ್ರ ಮಹಾಸಭಾ ಆಗಿ ವಿಸ್ತøತಗೊಂಡಿತು. ಆರ್ಥಿಕ ಸಮಸ್ಯೆಗಳಾದ ಬಿಟ್ಟಿ ಚಾಕರಿ, ಪುಕ್ಕಟೆ ವಸ್ತುಗಳನ್ನು ಕೊಡುವ ಪದ್ಧತಿ ಹಾಗೂ ಅಸ್ಪøಶ್ಯತೆ, ಬಾಲ್ಯವಿವಾಹ, ವಿಧವಾ ಸಮಸ್ಯೆಯಂಥ ಸಾಂಸ್ಕøತಿಕ ಅಂಶಗಳನ್ನು ಈ ಸಭೆ ತನ್ನ ಕಾರ್ಯಕ್ರಮಗಳನ್ನಾಗಿ ಸ್ವೀಕರಿಸಿತು. 

ಹೈದರಾಬಾದ್ ನಿಜಾಮ ಅಪಾರ ಆಸ್ತಿ ಹೊಂದಿದ್ದು ಅಲ್ಲಿ ರೈತರು ಪುಕ್ಕಟೆ ದುಡಿದು ಬೆಳೆಕೊಡಬೇಕಾಗಿತ್ತು. ಮತ್ತೊಂದು ಕಡೆ ಹೆಚ್ಚಿನ ತೆರಿಗೆ ಕೊಡಬೇಕಿತ್ತು. ಭೂಮಾಲೀಕರು ತುಂಡರಸರಾಗಿ ಭೂಮಿಯಲ್ಲಿ ದುಡಿಯುವವರನ್ನು ಜೀವಂತ ಹಿಂಡುತ್ತಿದ್ದರು. ಇದನ್ನು ಆಂಧ್ರ ಮಹಾಸಭಾ ಖಂಡಿಸಿ ಜನಸಂಘಟನೆ ಮಾಡಿತು. ಇದರಲ್ಲಿ ಕಿಸಾನ್‍ಸಭಾದ ಕಮ್ಯೂನಿಸ್ಟರು ಬಹಳ ಸಂಖ್ಯೆಯಲ್ಲಿ ಭಾಗವಹಿಸಿದರು. 1946 ಜುಲೈ ಹೊತ್ತಿಗೆ ತೆಲಂಗಾಣ ರೈತ ಚಳವಳಿಗೆ ಒಂದು ಸ್ಪಷ್ಟ ರೂಪ ಬಂತು. 

ಭಾರತಕ್ಕೆ ಸ್ವಾತಂತ್ರ್ಯ ಬಂದು ಈ ಹೋರಾಟಕ್ಕೆ ಮತ್ತೊಂದು ತಿರುವು ಉಂಟಾಯಿತು. ನಿಜಾಮ ತಾನು ಭಾರತಕ್ಕೆ ಸೇರುವುದಿಲ್ಲವೆಂದ. ದೇಶೀ ಚಿಂತಕರಿಗೆ ಇದು ಸಾಕಾಗಿತ್ತು. ಭಾರತ ಸರ್ಕಾರಕ್ಕೂ ಈ ಸಂದರ್ಭ ಸೂಕ್ತವೆನಿಸಿತು. ಹಲವು ಕಡೆಯಿಂದ ಹೋರಾಟಕ್ಕೆ ಬೆಂಬಲ ದೊರಕಿತು. ಹೈದರಾಬಾದ್ ಬಿಡುಗಡೆಯೂ ದುಡಿಯುವ ರೈತರ ಬಿಡುಗಡೆಯೂ ಒಂದೇ ವೇದಿಕೆಯ ಆಸಕ್ತಿಗಳಾದವು. ಇದು ಸತ್ಯಾಗ್ರಹವಾಗಿರಲಿಲ್ಲ, ಅಂತರ್‍ಯುದ್ಧವಾಗಿತ್ತು. ಹಿಂಸೆ-ಪ್ರತಿಹಿಂಸೆಗಳು ತಾಂಡವವಾಡಿದವು. ಹೈದರಾಬಾದ್ ಪ್ರಾಂತ ಭಾರತದೊಳಗೆ ವಿಲೀನಗೊಂಡ ಅನಂತರ ಹೋರಾಟ ತಣ್ಣಗಾಯಿತು. ಕಾಂಗ್ರೆಸ್ಸಿಗರು ಮತ್ತು ಇತರರು ಸೇರಿ ಕಮ್ಯೂನಿಸ್ಟರನ್ನು ಒಂಟಿ ಮಾಡಿದರು. ಚುನಾವಣಾ ಹೋರಾಟದ ಕಡೆಗೆ ನಡೆದರು. 

ಈ ಹೋರಾಟ ಭಾರತದ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯಾ ನಂತರದ ರೈತ ಹೋರಾಟಗಳ ಪ್ರವೃತ್ತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಭಾರತೀಯ ಪಕ್ಷ ಸಿದ್ಧಾಂತಗಳ ನೆಲೆಗಳನ್ನು ಪರಿಚಯ ಮಾಡಿಕೊಡುತ್ತದೆ. ವಿವಿಧ ರೈತ ವರ್ಗಗಳ ಹಿತಾಸಕ್ತಿಯನ್ನು ವಿಂಗಡಿಸಿ ತಿಳಿಸಿಕೊಡುತ್ತದೆ. ನಕ್ಸಲ್‍ಬಾರಿ, (1960) ಶ್ರೀಕಾಕುಲಂ (1965-70) ರೈತ ಹೋರಾಟದ ಬೀಜಗಳನ್ನು ಹುಟ್ಟಿಸಿತು. ಸಾಮಾಜಿಕ-ಆರ್ಥಿಕ ಹೋರಾಟಕ್ಕೆ ರಾಜಕೀಯ ಶಕ್ತಿಯನ್ನು ಬಳಸುವ ಅನಿವಾರ್ಯತೆಯನ್ನು ಈ ಮೂರೂ ರೈತ ಹೋರಾಟಗಳು ತಿಳಿಸುತ್ತವೆ. 
ಭಾರತಕ್ಕೆ ಸ್ವಾತಂತ್ರ್ಯ ಬರುವ ಸಾಧ್ಯತೆ ಕಂಡಂತೆಲ್ಲ, ಸ್ವಾತಂತ್ರ್ಯ ಸಿಕ್ಕಿದ ಆರಂಭದ ದಿನಗಳ ತನಕ ರೈತ ಹೋರಾಟಗಳು ಹೊಸ ದಿಕ್ಕನ್ನು ಪಡೆದವು. ಬೇಡಿಕೆಗಳು ಸಮಾನತಾ ಅವಕಾಶಗಳಾಗಿ ಮಾರ್ಪಟ್ಟವು. ಸರ್ವಾಧಿಕಾರದ ವಿರೋಧ ಪ್ರಜಾಪ್ರಭುತ್ವವನ್ನು ಬಲಪಡಿಸುವ ಶಕ್ತಿಯಾಗಿ ಮಾರ್ಪಟ್ಟಿತು. ಬೇಡಿಕೆಗಳನ್ನು ಹಕ್ಕುಗಳ ಒತ್ತಾಯಗಳಾಗಿ ಕೆಳಗಿನಂತೆ ಮಂಡಿಸಲಾಯಿತು. 

1. ಉಳುವವನಿಗೆ ಭೂಮಿ. ಹೆಚ್ಚಿನ ಭೂಮಿಯನ್ನು ಭೂಹೀನರಿಗೆ ಹಂಚುವುದು
2. ಲಾಭದಾಯಕ ಬೆಲೆಗಾಗಿ ಹೋರಾಟ
3. ಸಾಲದ ಹೊರೆಯಿಂದ ಮುಕ್ತಿ
4. ಲೆವಿ, ತೆರಿಗೆ, ಸರ್‍ಚಾರ್ಜುಗಳ ವಿರುದ್ಧ ಚಳವಳಿ
5. ಕೃಷಿ ಕೂಲಿಗಳಿಗೆ ಕನಿಷ್ಠ ವೇತನ ನಿಗದಿ
6. ಭೂಹೀನರಿಗೆ ನಿವೇಶನ
7. ಗುಡಿ ಕೈಗಾರಿಕೆಗಳಿಗೆ ಆದ್ಯತೆ
8. ಕೈಗಾರಿಕೆ ಮತ್ತು ಕೃಷಿ ಬೆಳೆಗಳ ಬೆಲೆಗಳಲ್ಲಿ ಸಮಾನತೆ ತರುವುದು
9. ಸಾಗುವಳಿಯಾಗದ ಭೂಮಿಗೆ ಕೃಷಿ ಸೇನೆ
10. ಚತುಸ್ತಂಭ ರಾಷ್ಟ್ರ ನಿರ್ಮಾಣ

	ರೈತ ಹೋರಾಟಗಳಿಂದ ಕರ್ನಾಟಕ ಹೊರಗೆ ಉಳಿದಿರಲಿಲ್ಲ. ಬೇರೆ ಬೇರೆ ಹೆಸರು ಹಾಗೂ ಉದ್ದೇಶದಿಂದ ಹಲವು ರೈತರ ಹಿತಾಸಕ್ತಿಯನ್ನು ಕುರಿತ ಹೋರಾಟಗಳು ನಡೆದವು. 1799ರ ದುಂಡಿಯಾ ವಾಘ ಮತ್ತು ಸಂಗಡಿಗರ ಆದಿವಾಸಿಗಳ ದಂಗೆ, 1803ರ ಬಳ್ಳಾರಿಯ ಪಾಳೆಗಾರರ ದಂಗೆ, 1830ರ ಸಂಗೊಳ್ಳಿ ರಾಯಣ್ಣನ ಬಂಡು, 1830-31ರ ಬೂದಿಬಸಪ್ಪನ ಬಂಡು, 1857ರ ಹಲಗಲಿಯ ಬೇಡರ ಬಂಡು, ನರಗುಂದದ ಬಾಬಾ ಸಾಹೇಬನ ಬಂಡು ಮುಖ್ಯವಾದವು. ನೇರವಾಗಿ ರೈತರ ಸಾಮಾನ್ಯ ಸಮಸ್ಯೆಗಳನ್ನು ಮುಂದಿರಿಸಿಕೊಂಡು ಅಂಕೋಲ, ಶಿರಸಿ, ಸಿದ್ಧಾಪುರ, ಹಿರೆಕೆರೂರು ಮುಂತಾದ ಕಡೆ ಕರನಿರಾಕರಣೆ ಚಳವಳಿಗಳು ನಡೆದವು. ಸ್ವಾತಂತ್ರ್ಯಾನಂತರದ ಪ್ರಮುಖ ರೈತ ಹೋರಾಟಗಳಿವು:
 ಕಾಗೋಡು ಸತ್ಯಾಗ್ರಹ (1950-51)
 ಸಾಗರ-ತೀರ್ಥಹಳ್ಳಿ ತಾಲ್ಲೂಕುಗಳ ಗೇಣಿದಾರರ ಹೋರಾಟ (1950-51)
 ಹಳಿಯಾಳ ರೈತ ಕೂಲಿಕಾರರ ಚಳವಳಿ (1979) ಹಾಗೂ
 ಕರ್ನಾಟಕ ರಾಜ್ಯ ರೈತ ಸಂಘದ ಚಳವಳಿ (1980)

ಮೊದಲೆರಡು ಹೋರಾಟಗಳು ಒಂದರ ಮುಂದುವರಿಕೆಯೇ ಮತ್ತೊಂದು ಎನ್ನುವಂತಿವೆ. ಕಾಂಗ್ರೆಸ್‍ನ ಸತ್ಯಾಗ್ರಹದಿಂದ ಆರಂಭಗೊಂಡ, ಈ ಚಳವಳಿಗಳು ಕೊನೆಗೆ ಸಮಾಜವಾದಿಗಳ ಕೈಗೆ ಬಂದವು. ಅವು ಹೋರಾಟದ ಪ್ರಜ್ಞೆಯನ್ನು ಮೂಡಿಸಿ ಹಿಂದೆ ಸರಿದವು. 

ಕಾಗೋಡು ಗ್ರಾಮದಲ್ಲಿದ್ದ ಏಳೂರಿನ ಹೆಸರಾದ ಗೌಡರ ಭೂಒಡೆತನದಲ್ಲಿ ಕೂಲಿಗಳಾಗಿದ್ದವರು ನಡೆಸಿದ ಹೋರಾಟ ತುಂಬ ಪ್ರಸಿದ್ಧವಾಗಿದೆ. 70 ದೀವರ ಕುಟುಂಬ, 18 ದಲಿತ ಕುಟುಂಬ, 3 ಮಡಿವಾಳ ಕುಟುಂಬ ಹಾಗೂ ಒಂದು ಅಕ್ಕಸಾಲಿ ಕುಟುಂಬಗಳು ಗೌಡರ ಗೇಣಿದರ, ಅಳತೆ, ಶೋಷಣೆ ವಿರುದ್ಧ ಪ್ರತಿಭಟಿಸಿದರು. ಇವರ ಪರವಾಗಿ ಮಲೆನಾಡ ಗೇಣಿದಾರರ ಸಂಘ (1946) ಸಾಗರ ತಾಲ್ಲೂಕು ರೈತಸಂಘ (1948) ಬೆಂಬಲಕ್ಕೆ ನಿಂತವು. ಕಾಗೋಡು ಸತ್ಯಾಗ್ರಹದ ಬೀಜಬಿತ್ತಿದ್ದು ಗಣಪತಿಯಪ್ಪ. ಇದನ್ನು ನಿರ್ವಹಿಸಿದ ಮುಖ್ಯರೆಂದರೆ ಕಡಿದಾಳ್ ಮಂಜಪ್ಪ, ಗರುಡಶರ್ಮ, ಜಿ.ಸದಾಶಿವರಾಯ, ಭಾ.ಸು.ಕೃಷ್ಣಮೂರ್ತಿ, ಸೀತಾರಾಮ ಐಯ್ಯಂಗಾರ್, ಶಾಂತವೇರಿ ಗೋಪಾಲಗೌಡ, ಎಸ್.ರಾಮಯ್ಯ, ಎಸ್.ಜಿ.ಗೋವಿಂದಪ್ಪ - ಮುಂತಾದವರು. ಈ ಹೋರಾಟಕ್ಕೆ ದೆಹಲಿಯಿಂದ ರಾಮಮನೋಹರ ಲೋಹಿಯಾ ಬಂದರು, ನೇರವಾಗಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಸ್ಥಳೀಯ ಹೋರಾಟಗಾರರನ್ನು ಹುರಿದುಂಬಿಸಿದರು. ಈ ಹೋರಾಟದ ಅಗತ್ಯವನ್ನು ಒತ್ತಿ ಹೇಳಿದರು. 

	ಕರ್ನಾಟಕದಲ್ಲಿ ಬಹು ದೊಡ್ಡದಾಗಿ ಬೆಳೆದ ಚಳವಳಿ ಕರ್ನಾಟಕ ರಾಜ್ಯ ರೈತ ಸಂಘ ನಡೆಸಿದ್ದು. ಇದು 1980ರಲ್ಲಿ ಹುಟ್ಟಿಕೊಂಡಿತು. ಇದಕ್ಕೆ ಮೂಲ ಪ್ರೇರಣೆ ದೊರಕಿದ್ದು ಮಲಪ್ರಭಾ ನೀರಾವರಿ ಪ್ರದೇಶದ ನರಗುಂದ, ನವಲಗುಂದ ಘಟನೆಗಳ ಮೂಲಕ. ಮಲಪ್ರಭಾ ಅಣೆಯ ನೀರು ತಮಗೆ ವರದಾನವಾಗುತ್ತದೆ ಎಂದು ನರಗುಂದ, ನವಲಗುಂದ, ರಾಮದುರ್ಗ ಹಾಗೂ ಸವದತ್ತಿ ತಾಲ್ಲೂಕಿನ ರೈತರು ನಂಬಿದ್ದರು. ಆ ಮಣ್ಣಿನ ಗುಣದಿಂದಾಗಿ ಅಣೆಯ ನೀರು ಕಾಲುವೆಗಳಲ್ಲಿ ಸರಿಯಾಗಿ ಹರಿಯಲಿಲ್ಲ. 1976ರಲ್ಲಿ ನೀರು ಬಂದರೂ ಸರ್ಕಾರ 1974ರಿಂದ ನೀರು ಹಾಗೂ ಅಭಿವೃದ್ಧಿ ತೆರಿಗೆಯನ್ನು ವಿಧಿಸಿತು. ಭೂಮಿ ಕಳೆದುಕೊಂಡವರಿಗೆ ಪರಿಹಾರ ಸಿಗುವುದು ತಡವಾಯಿತು. ಇದಕ್ಕೆ ಪೂರಕವಾಗುವಂತೆ ಈ ಅಣೆಯ ನೀರನ್ನು ನೀರಾವರಿ ಬೆಳೆಗೆ ಬಳಸುವಂತಿಲ್ಲ ಎಂದು ಸರ್ಕಾರ ಕಟ್ಟುಮಾಡಿತು. ಇದೇ ಸಂದರ್ಭದಲ್ಲಿ ಸರ್ಕಾರದ ವರಲಕ್ಷ್ಮಿ ಹತ್ತಿ ಬೀಜ ಪಡೆದು ಬೆಳೆ ಬೆಳೆದರೆ ಹಾಕಿದ ಹಣ ಕೈಗೆ ಬರದೆಹೋಯಿತು. ಅಧಿಕಾರಿಗಳ ಹಿಂಸೆ ಅಪಾರವಾಯಿತು. 1980 ಜುಲೈ 21ರಂದು ರೈತಜಾತಾ ನಡೆಯಿತು. ಅಧಿಕಾರಿಗಳ ಧಿಮಾಕಿನಿಂದಾಗಿ ಕೆಲ ರೈತರು ಗುಂಡೇಟಿಗೆ ಬಲಿಯಾದರು. ಇದು ಆ ಭಾಗದಲ್ಲಿ ರೈತ ಚಳವಳಿ ಹುಟ್ಟಲು ಕಾರಣವಾಯಿತು. ಅದರ ನೇತೃತ್ವವನ್ನು ಹಳಕಟ್ಟಿ, ಹೊಸಕೇರಿ, ಯಾವಗಲ್, ಕಪ್ಪಣ್ಣವರ್ ಮುಂತಾದ ಕಮ್ಯೂನಿಸ್ಟ್ ಚಿಂತಕರು ವಹಿಸಿದರು. 

	ಶಿವಮೊಗ್ಗ, ಹಾಸನ, ಮಡಿಕೇರಿ, ಮೈಸೂರು, ಮಂಡ್ಯ ರಾಯಚೂರು, ಬೆಳಗಾಂವಿ, ಧಾರವಾಡ  ಜಿಲ್ಲೆಗಳಲ್ಲಿ ಚಳವಳಿ  ವ್ಯಾಪಕವಾಯಿತು. ನೀರಿನ ಕರದ ವಿರುದ್ಧ ಆರಂಭವಾದ ಈ ರೈತ ಚಳವಳಿ ರೈತರ ಮೇಲೆ ಹೇರಿಕೊಂಡಿದ್ದ ವಿವಿಧ ಸಾಲ ಮನ್ನಾಕ್ಕಾಗಿ ಮುನ್ನಡೆಯಿತು. ಮುಂದುವರಿದು ಲೆವಿ ವಿರೋಧ, ಕೃಷಿ ಬೆಳೆಗಳಿಗೆ ನ್ಯಾಯಬೆಲೆ ಕೇಳುವ ಹಂತವನ್ನು ತಲುಪಿತು. ಸರ್ಕಾರದ ಸಾಲ ಜಪ್ತಿಗೆ ಪ್ರತಿಯಾಗಿ ಮರುಜಪ್ತಿ ಚಳವಳಿ ಶುರುವಾಯಿತು. ಈ ವಿಸ್ತøತ ರೈತ ಚಳವಳಿಯ ನೇತೃತ್ವವನ್ನು ಶಿವಮೊಗ್ಗದ ಹಿರಿಯ ಗಾಂಧೀವಾದಿ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಎಸ್.ರುದ್ರಪ್ಪ ವಹಿಸಿಕೊಂಡರು. ಇದರ ಕಾರ್ಯದರ್ಶಿ ಯಾಗಿ ಎನ್.ಡಿ.ಸುಂದರೇಶ್ ನೇಮಕಗೊಂಡರು. ನಂಜುಂಡಸ್ವಾಮಿ ಸಂಚಾಲಕರೆಂದು ನಿಯೋಜಿತರಾದರು. ಈ ಚಳವಳಿಗೆ ಬಹುಬೇಗ ಆಕರ್ಷಿತರಾದವರೆಂದರೆ ಕರ್ನಾಟಕದ ಹಳೆಯ ಹಾಗೂ ಹೊಸ ಸಮಾಜವಾದಿಗಳು. ಶಿವಮೊಗ್ಗ ಜಿಲ್ಲೆಯ ಕಡಿದಾಳ್ ಶಾಮಣ್ಣ, ಗಣಪತಿಯಪ್ಪ, ಹಾಸನದ ಮಂಜುನಾಥ ದತ್ತ, ಆರ್.ಪಿ. ವೆಂಕಟೇಶ ಮೂರ್ತಿ, ಎಚ್.ಎಮ್. ವಿಶ್ವನಾಥ್, ಜಾನಕೆರೆ ಮೋಹನ್, ವಾಸು, ಕೆ.ಎಚ್.ಹನುಮಂತೇಗೌಡ, ರಾಜೇಗೌಡ ಸೋಮವಾರಪೇಟೆ, ಡಿ.ಜೆ.ಶಿವರಾಮ್, ಮೈಸೂರಿನ ವೆಂಕಟಾಚಲಯ್ಯ, ಅರಸು, ನಾಯಕ್, ಮಂಡ್ಯದ ಎಸ್.ಡಿ. ಜಯರಾಮ್, ಎಚ್.ಶ್ರೀನಿವಾಸ್, ಪುಟ್ಟಣ್ಣಯ್ಯ, ಬಳ್ಳಾರಿಯ ಚನ್ನಬಸಪ್ಪ ಬೆಟ್ಟದೂರ್, ರಾಯಚೂರಿನ ಬಸವರಾಜ ತಂಬಾಕಿ, ಬೆಳಗಾಂವಿಯ ಬಾಬೂಗೌಡ ಪಾಟೀಲ್, ಸುರೇಶ್‍ಬಾಬು ಪಾಟೀಲ್, ಧಾರವಾಡದ ಹೇಮಂತ ಪಾಂಚಾಲ್, ಚನ್ನಪಟ್ಟಣದ ಸೋಮಣ್ಣ, ಅನಸೂಯಮ್ಮ, ಮುಖ್ಯರು. ಮೈಸೂರಿನಿಂದ ಅಧ್ಯಾಪಕರಾದ ಹಿ.ಶಿ.ರಾಮಚಂದ್ರೇಗೌಡ, ಕೆ.ಸಿ. ಬಸವರಾಜು, ಬೆಂಗಳೂರಿನ ಅಡ್ವೊಕೇಟ್ ರವಿವರ್ಮಕುಮಾರ್, ಎಸ್.ಆರ್.ನಾಯಕ್, ತುಮಕೂರಿನ ರಾಮಚಂದ್ರ ಮುಂತಾದವರು ಜೊತೆಗೂಡಿದರು. 

ಕರ್ನಾಟಕ ರಾಜ್ಯ ರೈತ ಚಳವಳಿ ತನ್ನ ಪ್ರಣಾಳಿಕೆಯನ್ನು ಹೀಗೆ ಮುಂದಿಟ್ಟಿತು : 
	“ರೈತಾಪಿ ಜನರ ಬಡತನಕ್ಕೆ ಮತ್ತು ಋಣಬಾಧೆಗೆ ಕಾರಣಗಳು ರೈತಾಪಿ ಜನರಲ್ಲ, ಬೇಸಾಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಲೆವಿ ನೀತಿ, ಬೆಲೆ ನೀತಿ, ಸಾಲ ನೀತಿ ಮತ್ತು ಕಂದಾಯ ನೀತಿಗಳು ಅವರ ಬಡತನಕ್ಕೆ ನೇರ ಕಾರಣಗಳು. ಸರ್ಕಾರದ ಯೋಜನಾ ನೀತಿ ಎಲ್ಲಕ್ಕಿಂತ ಮುಖ್ಯಕಾರಣ” ಆದ್ದರಿಂದ 
1. ಕಾರ್ಮಿಕರಿಗೆ ಹೆಚ್ಚಿನ ಕೂಲಿ
2. ಗೇಣಿದಾರರಿಗೆ ಭೂಮಿ
3. ಗ್ರಾಮಗಳಿಗೆ ಸೇ.80 ಯೋಜನಾ ವೆಚ್ಚ
4. ಬೇಸಾಯಗಾರರ ಮಕ್ಕಳಿಗೆ ಸೇ.80 ಹುದ್ದೆ ಮೀಸಲು
5. ಎಲ್ಲಾ ಕಂದಾಯ ರದ್ದು
6. ರೈತರ ಬೆಳೆಗಳಿಗೆ ನ್ಯಾಯಬೆಲೆ : ವೈಜ್ಞಾನಿಕ ಬೆಲೆ
7. ರೈತರ ಎಲ್ಲಾ ಸಾಲ ರದ್ದು (ಲೆವಿ ಮೂಲಕ ಅವರು ಸಾಲದ ನೂರು ಪಟ್ಟು ಹಣವನ್ನು ಈಗಾಗಲೇ ಸರ್ಕಾರಕ್ಕೆ ಕೊಟ್ಟಿದ್ದಾರೆ)
8. ರೈತರ ವಸ್ತುಗಳನ್ನು ಜಪ್ತಿ ಮಾಡಿದರೆ ಮರುಜಪ್ತಿ ಮಾಡಲಾಗುವುದು. 

	ಹೀಗೆ ಆರ್ಥಿಕ ಬೇಡಿಕೆಗಳ ಮೂಲಕ ಕರ್ನಾಟಕದ ಬಹುಭಾಗವನ್ನು ವ್ಯಾಪಿಸಿದ ಈ ರೈತ ಚಳವಳಿ ಸಾಂಸ್ಕøತಿಕ ಆಂದೋಲನಕ್ಕೂ ಕೈಹಾಕಿತು. ಜಾತಿ ನಿರ್ಮೂಲನೆ, ಸರಳ ಮದುವೆ, ಸಾಂಸ್ಕøತಿಕ ಸಮಾನತೆ, ಸ್ವಾಭಿಮಾನ, ಲಂಚ ನಿರ್ಮೂಲನೆ, ಸ್ತ್ರೀ ಸಮಾನತೆ - ಹೀಗೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿತು. ರೈತ ಸಾಹಿತ್ಯ ರಚನೆ ಮಾಡುವುದರ ಜೊತೆಗೆ ಸಾವಿರಾರು ಸರಳ ಮದುವೆಗಳನ್ನು ವರದಕ್ಷಿಣೆ ಹಾಗೂ ಸಂಪ್ರದಾಯ ಬಿಟ್ಟು ಕಾರ್ಯರೂಪಕ್ಕೆ ತಂದಿತು. 

	ಚರಿತ್ರೆಯ ಒತ್ತಡ ಎನ್ನುವಂತೆ 1980-1990ರ ದಶಕ ದಕ್ಷಿಣ ಭಾರತದ ರೈತ ಚಳವಳಿಗಳ ಸುಗ್ಗಿ ಎನ್ನಬಹುದು. ತಮಿಳುನಾಡಿನಲ್ಲಿ ಬಹಳ ವರ್ಷಗಳಿಂದ ಇದ್ದ ನಾರಾಯಣಸ್ವಾಮಿ ನಾಯಿಡು, ಹಾಗೂ ಶಿವಸ್ವಾಮಿ ನೇತೃತ್ವದ ರೈತ ಚಳವಳಿ ಒಂದು ದೊಡ್ಡ ಸಮೂಹ ಪ್ರವಾಹವಾಯಿತು. ಕೇರಳದಲ್ಲಿ ಎಡಪಂಥೀಯರ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲೂ ರಾಜ್ಯ ಮಟ್ಟದಲ್ಲೂ ರೈತರ ಸಮಸ್ಯೆಗಳನ್ನು ಎತ್ತಿಕೊಂಡು ಚಳವಳಿಗಳು ನಡೆದವು. ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ತೆಲುಗು ದೇಶಂ ಅಧಿಕಾರಕ್ಕೆ ಬರಲು ಎಡಪಂಥೀಯ ಹಾಗೂ ಇತರ ಪಂಥಗಳ ನಾಯಕತ್ವದ ರೈತ-ಆದಿವಾಸಿ ಹೋರಾಟಗಳು ಕಾರಣವಾದವು. ಒರಿಸ್ಸದಲ್ಲಿ ಕಿಶನ್ ಪಟ್ನಾಯಕ್ ಅವರ ನೇತೃತ್ವದಲ್ಲಿ ಸಮಾಜವಾದಿ ಚಿಂತನೆಯ ಆಧಾರದ ಮೇಲೆ ರೈತರನ್ನು ಸಂಘಟಿಸ ಲಾಯಿತು. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರೈತ ಚಳವಳಿಗಳ ಸಮನ್ವಯ ಸಮಿತಿಯನ್ನು ರಚಿಸ ಲಾಯಿತು. ಈ ಸಮಿತಿ ಉತ್ತರ ಭಾರತದ ಅದರಲ್ಲೂ ಉತ್ತರ ಪ್ರದೇಶ, ಹರ್ಯಾಣ ರೈತನಾಯಕರ ಜೊತೆಗೆ ತಾತ್ತ್ವಿಕ ಸಂಬಂಧವನ್ನು ಹೊಂದಿತು. ಉತ್ತರ ಪ್ರದೇಶದ ಮಹೇಂದ್ರ ಸಿಂಗ್ ಟಿಕಾಯತ್‍ರ ರೈತ ಚಳವಳಿ ದಕ್ಷಿಣದ ರೈತನಾಯಕರ ನೆರವು ಪಡೆಯಿತು. ಈ ಮಧ್ಯೆ ಭಾರತ ಮಟ್ಟದ ಎಲ್ಲ ರೈತ ಸಂಘಟನೆಗಳ ಸಮಾವೇಶ ಬಿಹಾರದಲ್ಲಿ ಸೇರಿತು. 1990ರ ಅನಂತರ ಈ ಚಳವಳಿಗಳು ಮೊದಲ ಬಿರುಸನ್ನು ಕಳೆದುಕೊಂಡವು. ಪ್ರಾದೇಶಿಕ ಪಕ್ಷಗಳ ಶಕ್ತಿ ಹೆಚ್ಚುತ್ತ ಬಂದಂತೆಲ್ಲ ರೈತ ಚಳವಳಿಗಳ ಕಾವು ಕಡಿಮೆಯಾದುದನ್ನು ಗಮನಿಸಬಹುದು.	
(ಎಚ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ